ಪಾರಂಪರಿಕ ತಿಳಿವಳಿಕೆಯ ಆಕರಗಳು
ಆಶ್ವಶಾಸ್ತ್ರ
  1. ಅಶ್ವಶಾಸ್ತ್ರ
  2. ಲೇಖಕ: ಅಭಿನವಚಂದ್ರ
  3. ಕಾಲ: ಸುಮಾರು ಕ್ರಿ.ಶ. 1400 (ಸುಮಾರು ಕ್ರಿ.ಶ. 1200 ಎಂದು ಬಿ.ಎಸ್. ಸಣ್ಣಯ್ಯನವರ ಅಭಿಪ್ರಾಯ)
  4. ವಸ್ತು: ಕುದುರೆಗಳನ್ನು ಸಾಕುವ ಮತ್ತು ಉತ್ತಮ ತಳಿಯ ಕುದುರೆಗಳನ್ನು ಪಡೆಯುವ ವಿಧಾನ.
  5. ಪ್ರಾಚೀನ ಕನ್ನಡದಲ್ಲಿ, ಪಶುಪಾಲನೆ ಮತ್ತು ಪಶುವೈದ್ಯವನ್ನು ಕುರಿತ ಪುಸ್ತಕಗಳು ಬಹಳ ಅಪರೂಪ. ಅಭಿನವಚಂದ್ರನ ಅಶ್ವಶಾಸ್ತ್ರವು, ಕುದುರೆಗಳ ಪಾಲನೆ ಪೋಷಣೆಗಳ ಬಗ್ಗೆ ಮಾಹಿತಿ ನೀಡಲೆಂದೇ ರಚಿತವಾದ ಕೃತಿ. ಈ ಕೃತಿಯನ್ನು ಚಂದ್ರಮತ ಮತ್ತು ತುರಗಾಗಮ ಎಂಬ ಹೆಸರುಗಳಿಂದಲೂ ಕರೆಯಲಾಗಿದೆ. ಲೇಖಕನು ಇದೇ ವಸ್ತುವನ್ನು ಕುರಿತು ರಚಿತವಾಗಿರುವ ಪುಸ್ತಕಗಳ ಲೇಖಕರಾದ ಚಂದ್ರಕವಿ, ರೇವಂತ ಮತ್ತು ಸಿಂಹದತ್ತರಿಂದ ತಾನು ಪಡೆದಿರುವ ನೆರವನ್ನು ಹೇಳಿಕೊಂಡಿದ್ದಾನೆ.

ಅಶ್ವಶಾಸ್ತ್ರವು ಸುಮಾರು 900 ಪದ್ಯಗಳನ್ನು ಒಳಗೊಂಡಿರುವ 16 ಅಧ್ಯಾಯಗಳನ್ನು ಹೊಂದಿದೆ. ಬಹು ಪಾಲು ಪದ್ಯಗಳು ಕಂದಪದ್ಯಗಳಾಗಿವೆ. ಮೊದಲ ಭಾಗದಲ್ಲಿ ಕುದುರೆಯ ದೇಹದ ಪ್ರತಿಯೊಂದು ಅಂಗವನ್ನೂ ರೋಗನಿದಾನದ ನೆಲೆಯಲ್ಲಿ ಪರಿಶೀಲಿಸುವ ವಿಧಾನವನ್ನು ವಿವರಿಸಲಾಗಿದೆ. ಕುದುರೆಯ ಬಣ್ಣ, ಸುಳಿಗಳು, ಶುಭಲಕ್ಷಣಗಳು ಮತ್ತು ಅವಲಕ್ಷಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಮಗ್ರವಾಗಿ ಕೊಡಲಾಗಿದೆ. ಕುದುರೆಯ ಹಲ್ಲುಗಳನ್ನು ಪರೀಕ್ಷಿಸಿ ಅದರ ವಯಸ್ಸನ್ನು ಹೇಳುವ ವಿಧಾನದ ಸ್ಪಷ್ಟ ನಿರೂಪಣೆಯಿದೆ. ಕುದುರೆಗಳಿಗೆ ಬರಬಹುದಾದ ನಿರ್ದಿಷ್ಟ ರೋಗಗಳು ಮತ್ತು ಸಾಧ್ಯವಿರುವ ಚಿಕಿತ್ಸಾವಿಧಾನಗಳನ್ನೂ ವರ್ಣಿಸಲಾಗಿದೆ. ಸಾಹಿತ್ಯಕೃತಿಗಳಲ್ಲಿ ಬರುವ ಕುದುರೆಗಳಿಗೆ ಸಂಬಧಿಸಿದ ಅನೇಕ ಪಾರಿಭಾಷಿಕ ಪದಗಳ ಖಚಿತವಾದ ಅರ್ಥವನ್ನು ತಿಳಿಯಲು ಈ ಕೃತಿಯು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಇದು ತಾಂತ್ರಿಕವಾದ ತೀಳಿವಳಿಕೆಯ ಸರಳವೂ ನೇರವೂ ಆದ ನಿರೂಪಣೆ.

  1. ಪ್ರಕಟಣೆ: 1. 1950, ಸಂ. ಎಚ್. ಶೇಷಯ್ಯಂಗಾರ್ ಮತ್ತು ಪಿ. ಶ್ರೀನಿವಾಸರಾವ್, ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸ್ 2. ಜಿ.ಜಿ. ಮಂಜುನಾಥನ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು
  2. ಮುಂದಿನ ಓದು:
  3. ಮಂಜುನಾಥನ್ ಅವರು ತಮ್ಮ ಆವೃತ್ತಿಯನ್ನು ಐದು ಹೊಸ ಹಸ್ತಪ್ರತಿಗಳ (ಅಪೂರ್ಣ) ನೆರವಿನಿಂದ ಸಿದ್ಧಪಡಿಸಿದ್ದಾರೆ.

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು